ಜಪಾನೀ ತೋಟ

 ಉದ್ಯಾನದ ಹಲವಾರು ಬಗೆಗಳಲ್ಲಿ ಒಂದು. ಉಳಿದೆಲ್ಲ ಬಗೆಗಳಿಗಿಂತ ಭಿನ್ನ ಹಾಗೂ ವಿಚಿತ್ರ ರೀತಿಯಾಗಿದೆ. ಹಾಗೆಯೇ ಉಳಿದವುಗಳಿಗಿಂತ ವೈಯಕ್ತಿಕವಾದುದು ಹಾಗೂ ಆತ್ಮೀಯವಾದುದು. ಇದು ಮೊದಲು ರೂಪ ತಾಳಿದ್ದು ಚೀನದಲ್ಲಿ ಅಥವಾ ಕೊರಿಯದಲ್ಲಿ ಎನ್ನಲಾಗಿದೆ. 5ನೆಯ ಶತಮಾನಕ್ಕೂ ಮುಂಚೆಯೇ ಈ ಪದ್ಧತಿ ಜಪಾನಿಗೆ ಕಾಲಿಟ್ಟಿತು ಎಂದು ಅಲ್ಲಿನ ರಾಜವಂಶದ ದಾಖಲೆಗಳಿಂದ ತಿಳಿದುಬರುತ್ತದೆ. ಜಪಾನೀ ತೋಟಗಾರಿಕೆಯ ಕಲೆ ಮೂಲತಃ ಭಾರತದ್ದು; ಭಾರತದಿಂದ ಬೌದ್ಧಧರ್ಮ ಜಪಾನಿಗೆ ಹೋದಾಗ ಇದೂ ಹೋಯಿತು ಎಂಬ ಅಭಿಪ್ರಾಯವೂ ಇದೆ.

ಆಧುನಿಕ ಜಪಾನೀ ತೋಟ ಜಪಾನಿನ ದೈವಾರಾಧಕರ ಮತ್ತು ಉದ್ಯಾನಪ್ರೇಮಿಗಳ ಸುಮಾರು 11 ಶತಮಾನಗಳ ದೀರ್ಘಾವಧಿಯ ಪ್ರಯತ್ನಗಳಿಂದ ರೂಪುಗೊಂಡಿದೆಯೆನ್ನಬಹುದು.

ಇದರ ಉದ್ದೇಶ-ಸೂಕ್ಷ್ಮಾಕಾರದಲ್ಲಿ ಪರ್ವತಪ್ರದೇಶಗಳ ದೃಶ್ಯವನ್ನು ಪ್ರತಿಬಿಂಬಿಸುವುದು. ವಿಶಿಷ್ಟಬಗೆಯ ಒಂದು ಸಣ್ಣ ಜಲಪಾತ, ಒಂದು ಸಣ್ಣ ಕೊಳ ಮತ್ತು ಅದರಲ್ಲಿ ಒಂದು ನಡುಗಡ್ಡೆ (ದ್ವೀಪ), ಒಂದು ಸೇತುವೆ, ವಿಶಿಷ್ಟರೀತಿಯಲ್ಲಿ ಹೊಂದಿಸಿದ ಕಲ್ಲುಬಂಡೆಗಳು, ಬೆಳಕನ್ನು ಸೂಚಿಸುವಂತೆ ಇರಿಸಿರುವ ಒಂದು ಸಾಲಂಕೃತ ಕಲ್ಲುಕಂಬ ಮತ್ತು ಕಲ್ಲಿನ ತೂಗುದೀಪ-ಇವನ್ನೆಲ್ಲ ಒಳಗೊಂಡಿರುತ್ತದೆ.

ಬೌದ್ಧಮತದ ಜೆóನ್ ಪಂಗಡದಲ್ಲಿ ಸುಂದರ ಉದ್ಯಾನಗಳನ್ನು ನಿರ್ಮಿಸುವುದು ಆ ಧರ್ಮದ ಅನುಷ್ಠಾನದ ಒಂದು ಅಂಗ ಆಗಿತ್ತು. ಜೆóನ್ ಪಂಗಡದ ಆರಾಧಕ ಮ್ಯೂಸೊ ಕೋಕುಷಿ ಎಂಬವನಿಂದ 14ನೆಯ ಶತಮಾನದ ಆದಿಭಾಗದಲ್ಲಿ ರೂಪುಗೊಂಡ ಒಂದು ಉದ್ಯಾನವನ್ನು ಇಂದಿಗೂ ಕೀಯೋಟೋ ನಗರದಲ್ಲಿ ರಕ್ಷಿಸಿಕೊಂಡು ಬರಲಾಗಿದೆ. ನೀರಿನ ಪೂರೈಕೆ ಕಡಿಮೆಯಿದ್ದಲ್ಲಿ ಶುಷ್ಕ ವಾತಾವರಣದ ಶಿಲಾ ತೋಟಗಳು ಎಂಬುವು ಅಸ್ತಿತ್ವದಲ್ಲಿ ಬರುತ್ತವೆ. ಅಲ್ಲಿ ನೀರಿನ ನೆಲೆಯನ್ನು ಸೂಚಿಸಲು ಸಣ್ಣ ಕಣಗಳ ಉಸುಕನ್ನು (ಮರಳು) ಅಲ್ಲಲ್ಲಿ ಚೆಲ್ಲಿ ಹರಡಿರುವುದುಂಟು. ಅಲ್ಲಿ ಮರಗಳ ಗುಂಪು ಕಂಡುಬರುವುದಿಲ್ಲ. ನಿತ್ಯಹರಿದ್ವರ್ಣ ಎಲೆಗಳುಳ್ಳ ಮರಗಳ ಹಿನ್ನೆಲೆಯಲ್ಲಿ ಒಂದು ಸೂಕ್ತ ಕೋನ ನಿರೂಪಿಸುವಂತೆ ಒಂದೇ ಒಂದು ಚೆರಿಹಣ್ಣಿನ ಮರವನ್ನು ನೆಟ್ಟಿರುವುದುಂಟು. ಸಾಲುಮರ ಇಲ್ಲವೆ ಮರಗಳ ಗುಂಪುಗಳಿಗಿಂತ ಇದು ಬಹುಮಟ್ಟಿಗೆ ಸುಂದರವಾಗಿ ಕಾಣುತ್ತದೆ. ಇಂಥ ಉದ್ಯಾನಗಳಲ್ಲೆಲ್ಲ ಸರಳತೆಯೇ ಪ್ರಧಾನ ಅಂಶ. ಸಾಧ್ಯವಿದ್ದ ಮಟ್ಟಿಗೆ ಆಯಾ ಪ್ರದೇಶಗಳ ನೈಸರ್ಗಿಕವಸ್ತುಸ್ಥಿತಿಗೆ ಸರಿಹೊಂದುವ ಸನ್ನಿವೇಶಗಳನ್ನು ನಿರ್ಮಿಸಿ ಅಲ್ಲಿ ಮರಗಳನ್ನು ನೆಡುವುದು ಮುಖ್ಯ ಉದ್ದೇಶವಾಗಿರುತ್ತದೆ. ಆದರೆ ಜಪಾನೀ ತೋಟ ಎಂದ ಕೂಡಲೇ ಕೆಲವು ಕಲ್ಲುಗುಡ್ಡಗಳು, ಸೇತುವೆ ಮತ್ತು ಕಲ್ಲಿನ ತೂಗು ದೀಪ ಇವು ಮಾತ್ರ ಇರುತ್ತವೆಯೆಂದು ಭಾವಿಸಲಾಗದು. ಜಪಾನೀ ತೋಟದ ಮೂಲಭಾವನೆ ನಿಶ್ಯಬ್ದತೆ ಮತ್ತು ಶಾಂತಿಯಲ್ಲಿ ಅಡಗಿದೆ. ಅಲ್ಲಿಗೆ ಹೋಗುವುದು ಧ್ಯಾನಕ್ಕೆ, ಜಗತ್ತಿನ ಜಂಜಡಗಳನ್ನೆಲ್ಲ ಕೆಲಕಾಲ ಮರೆತು ಹಾಯಾಗಿ ವಿರಮಿಸುವುದಕ್ಕೆ ಮತ್ತು ಆಧುನಿಕ ಜನಜೀವನದ ಅವಸರ, ಸದ್ದುಗದ್ದಲಗಳನ್ನು ತಪ್ಪಿಸಿಕೊಳ್ಳುವುದಕ್ಕೆ.

ಬೇಸಿಲ್ ಟೇಲರ್ ಎಂಬಾಕೆ ಜಪಾನೀ ತೋಟದ ಬಗ್ಗೆ ಹೇಳುವ ಮಾತುಗಳು ಅತ್ಯಂತ ಸಮಂಜಸವೆನಿಸುತ್ತವೆ. "ಇದರ ನಿರ್ಮಾಣದಲ್ಲಿ ಅಡಗಿರುವ ಸಂಕೀರ್ಣತೆ ಮತ್ತು ಉಚ್ಚಕಲೆಯನ್ನು ಅರ್ಥಮಾಡಿಕೊಳ್ಳುವಾಗ ದೊರೆಯುವ ಪರಿಹಾರ ಆಧ್ಯಾತ್ಮಿಕ ಹಿನ್ನೆಲೆಯದಾಗಿರುತ್ತದೆ. ಅದರಲ್ಲಿರುವ ಕೆಲ ಜಾಗ್ರತವಾಗಿ ಇಲ್ಲವೆ ಅಜಾಗ್ರತವಾಗಿ ನಮ್ಮ ಮನಸ್ಸಿನ ಭಾವನೆಗಳನ್ನು ಮೇಲಿನ ಸ್ತರಕ್ಕೆ ಒಯ್ದು, ದೈಹಿಕ, ಮಾನಸಿಕ ಸ್ಫೂರ್ತಿ ವಿಶ್ರಾಂತಿಗಳನ್ನು ನೀಡುವಂತಾಗುತ್ತದೆ."

ಜಪಾನೀ ತೋಟದಲ್ಲಿ ಯಾರೇ ಆಗಲೀ, ಅವಸರದಿಂದ ಹಾಯ್ದುಹೋಗುವ ಉದ್ದೇಶವಿಟ್ಟುಕೊಳ್ಳಲಾಗದು. ಅಲ್ಲಿನ ಸೇತುವೆ, ಹಂತಹಂತಗಳಾಗಿ ಜೋಡಿಸಿರುವ ಕಲ್ಲುಬಂಡೆಗಳು, ಗಿಡಮರಗಳ ನೆಳಲು, ಚಹಾಪಾನಗೃಹಗಳು, ಕೊಳದಲ್ಲಿರುವ ಬಂಗಾರದ ಬಣ್ಣದ ಮೀನುಗಳು, ಸಣ್ಣ ಜಲಪಾತಗಳಿಂದ ಬೀಳುವ ನೀರಿನ ತುಂತುರುಗಳು-ಇವು ದೈಹಿಕ ಆಹ್ಲಾದತೆಯನ್ನು ನೀಡುವುವಲ್ಲದೆ ಅಲ್ಲಿಯೇ ಬಹಳ ಹೊತ್ತು ಕಳೆಯುವ ಹಾಗೆ ಆಮಿಷ ತೋರುತ್ತವೆ. ಆಗ ಅಲ್ಲಿನ ಚೆರಿ ಮರಗಳ ಗುಲಾಬಿಬಣ್ಣದ ನಾಜೂಕಾದ ಹೂಗಳ, ಪ್ಲಮ್ ಗಿಡಗಳ ಬಿಳಿ ಹೂಗಳ ಸೌಂದರ್ಯಕ್ಕೆ ಮಾರುಹೋಗಿ ತೆರೆದ ಮನಸ್ಸು ಮತ್ತು ಹೃದಯಗಳಿಂದ ಅದರಲ್ಲಿ ತನ್ಮಯತೆ ಹೊಂದುವುದು ಸಾಮಾನ್ಯ. ಈ ಅಚ್ಚ ಬಿಳಿ ಹೂಗಳು, ಕ್ರಿಪ್ಟೊ ಮೀರಿಯ, ಫರ್ ಮುಂತಾದ ಶಂಕುಪರ್ಣಿ ಸಸ್ಯಗಳ ಹಚ್ಚಹಸಿರಿನ ಹಿನ್ನೆಲೆಯಲ್ಲಿ ಅತ್ಯಂತ ಆಕರ್ಷಕವಾಗಿ ಕಂಡರೆ ಆಶ್ಚರ್ಯವೇನಲ್ಲ.

ಉದ್ಯಾನದ ಬಾಗಿಲ ಬಳಿ ರಕ್ಷಕರಂತೆ ಎರಡೂ ಕಡೆ ಪೂಜನೀಯವೆನಿಸಿದ ಮತ್ತು ದೀರ್ಘ ಜೀವನಾವಧಿಯ ಸೂಚಕವೆಂಬಂತಿರುವ ಪೈನ್ ಮರಗಳು ಇರುವುದುಂಟು. ಕಲ್ಲುಬಂಡೆಗಳ ಮೇಲೆ ರಕ್ತ ಚೆಲ್ಲಿದಂತೆ ಅಚ್ಚ ಕೆಂಪಿನ ಅಜೇóಲಿಯ ಸಸ್ಯಗಳು ಇರುತ್ತವೆ. ಐರಿಸ್ ಗಿಡಗಳು ತಮ್ಮ ಅತಿ ಸುಂದರ ಪುಷ್ಪಗಳ ಬೆಡಗನ್ನು ಪ್ರದರ್ಶಿಸುತ್ತ ಇರುತ್ತವೆ. ಅಲ್ಲಲ್ಲೇ ಇರುವ ಚಿಕ್ಕ ಕೊಳಗಳ ನೀರಿನಲ್ಲಿ ತಮ್ಮ ಪ್ರತಿಬಿಂಬಕ್ಕೆ ತಾವೇ ಮಾರು ಹೋಗುವಂತೆ ಅವು ತೋರುತ್ತವೆ.

ಉದ್ಯಾನದಲ್ಲಿ ಕೂತಲ್ಲಿಯೇ ಪಕ್ಷಿಗಳ ಚಲನೆಯನ್ನು ಗಮನಿಸುತ್ತ ಕಮೇಲಿಯ, ಪಿಯೋನಿಯ ಮುಂತಾದ ಕೆಲವು ವೃಕ್ಷಗಳ ಸೌಂದರ್ಯವನ್ನು ಮೆಲುಕು ಹಾಕುತ್ತಿರಬಹುದು. ಕೆಲವು ಸೂಕ್ಷ್ಮಬಗೆಯ ಹೂಗಳು ಮತ್ತು ಅವುಗಳ ಬಣ್ಣ ಒಂದಾದ ಮೇಲೊಂದು ಸರದಿಯಂತೆ ತಿಂಗಳು ತಿಂಗಳಿಗೂ ಬದಲಾಗುತ್ತಲೇ ಇರುತ್ತವೆ. ಹೀಗಾಗಿ ವರ್ಷವಿಡೀ ಅಲ್ಲಿ ಒಂದಲ್ಲ ಒಂದನ್ನು ನೋಡಿ ಮೆಚ್ಚುವುದಕ್ಕೆ ಅವಕಾಶವಿರುತ್ತದೆ. ಹೂಬಿಡುವ ಮರಗಳನ್ನು ಅಲ್ಲೊಂದು ಇಲ್ಲೊಂದರಂತೆ ಕೆಲವು ಆಯ್ದ ಸೂಕ್ತಸ್ಥಳಗಳಲ್ಲಿ ಬೆಳೆಸಿರುವುದರಿಂದ ನಿಸರ್ಗದ ಸುಂದರ ಭೂ ದೃಶ್ಯಾವಳಿಯೇ ಕಣ್ಣೆದುರಿಗೆ ಬಂದು ನಿಂತಿದೆಯೆಂಬ ಭಾವನೆ ಮೂಡುತ್ತದೆ. ಜಪಾನಿನಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಎಲ್ಲ ಉದ್ಯಾನಗಳು ಭೂದೃಶ್ಯಾವಳಿಯ ತೋಟಗಳೇ ಆಗಿದ್ದು, ಅವು ಒಂದು ಚಿಕ್ಕ ಪ್ರಮಾಣದಲ್ಲಿ ಜಪಾನಿನ ನಿಸರ್ಗ ಸೌಂದರ್ಯವನ್ನು ಸೆರೆಹಿಡಿದಿಟ್ಟು ಒಂದು ವಿಶಿಷ್ಟ ಪ್ರತಿರೂಪವೆಂತಲೇ ತೋರುತ್ತವೆ.
ಜಪಾನೀ ತೋಟದಲ್ಲಿ ಮೊಗಲ್ ತೋಟಗಳಲ್ಲಿರುವಂತೆಯೇ ನೀರಿಗೆ ಬಹು ಪ್ರಾಶಸ್ತ್ಯವುಂಟು. ನೀರಾವರಿಯನ್ನು ಬಿಟ್ಟರೂ ಉಳಿದ ಉದ್ದೇಶಗಳಿಗೆ ಜಪಾನೀಯರು ನೀರನ್ನು ಹೇಗೆ ಬಳಸಿಕೊಳ್ಳುತ್ತಾರೆಂಬುದನ್ನು ವಿವರಿಸುತ್ತ ಬೇಸಿಲ್ ಟೇಲರ್ ಹೀಗೆ ಬರೆಯುತ್ತಾರೆ-"ಕಲ್ಲು ಬಂಡೆಗಳು ಉದ್ಯಾನದ ಅಸ್ಥಿಪಂಜರ ಮತ್ತು ಮೂಳೆಗಳಿದ್ದಂತೆ. ಭೂಮಿಯ ಬಾಹ್ಯಾಕಾರ ಉದ್ಯಾನದ ಪ್ರಮುಖ ಲಕ್ಷಣಗಳನ್ನು ನಿರ್ಧರಿಸುತ್ತದೆ. ಹೂ ಮರಗಳು ಉದ್ಯಾನವೆಂಬ ದೇಹಕ್ಕೆ ಮಾಂಸ ಖಂಡಗಳು ಮತ್ತು ಪೋಷಾಕಿನ ಸೊಗಸು ಇದ್ದಂತೆ. ಈ ಭೂ ಉದ್ಯಾನದಲ್ಲಿ ಹಲವಾರು ವಿಶೇಷಗಳನ್ನು ಪುನರಾವರ್ತನೆ ಗೊಳಿಸುವುದರಿಂದ ಮತ್ತು ಅವುಗಳನ್ನು ನೀರಿನಲ್ಲಿ ಪ್ರತಿಬಿಂಬಿಸುವುದರಿಂದ ಏನು ಲಾಭವಿದೆಯೋ, ಅದು ಜಪಾನೀ ಭೂ ದೃಶ್ಯ ಕಲಾಕಾರನಿಗಷ್ಟೇ ಹೊರತು, ಇತರರಿಗೆ ತಿಳಿಯುವುದು ಸಾಧ್ಯವಿಲ್ಲ. ನಿಲುಗನ್ನಡಿಗಳು ಚಿಕ್ಕಕೋಣೆಗಳಲ್ಲಿ ವಸ್ತುಗಳನ್ನು ಹಿಗ್ಗಿಸಿ ತೋರಿಸುವಂತೆ, ಸೂರ್ಯಾಸ್ತದ ಸಮಯದಲ್ಲಿ ಪಶ್ಚಿಮ ತೀರದ ಸಮುದ್ರದಲ್ಲಿ ಆಕಾಶವು ತನ್ನ ವೈಭವ ಮತ್ತು ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವಂತೆ, ಉದ್ಯಾನದಲ್ಲಿನ ಕೊಳಗಳು ತಮ್ಮ ಸೌಂದರ್ಯ, ವಿಶಿಷ್ಟ ನೆಲೆ, ಹಿನ್ನೆಲೆ ಇತ್ಯಾದಿಗಳ ದೃಷ್ಟಿಯಿಂದ ಇಡೀ ಉದ್ಯಾನದ ವೈಭವ, ಗಾಂಭೀರ್ಯಗಳನ್ನು ಹೆಚ್ಚಿಸುತ್ತವೆ.

ಪೈನ್ ಮರಗಳು ಜಪಾನೀಯರಿಗೆ ಪರಮಪ್ರಿಯವಾದುದರಿಂದ ಅವುಗಳನ್ನು ಕಲಾತ್ಮಕವಾಗಿ ಕತ್ತರಿಸಿ ನೀರಿನ ಮೇಲೆ ಆಕರ್ಷಕ ರೀತಿಯಲ್ಲಿ ಬಾಗಿರುವಂತೆ ಮಾಡಿರುವುದೂ ಒಂದು ವೈಶಿಷ್ಟ್ಯ. ಒಮ್ಮೊಮ್ಮೆ ಮರಗಳನ್ನು ಸಾಗಾಟದ ದೋಣಿಗಳಂತೆ ವಿಚಿತ್ರರೂಪಕ್ಕೆ ಪರಿವರ್ತಿಸುವುದೂ ಉಂಟು. ಅಲ್ಲಿನ ತಂಗುಮನೆಗಳ ಬಳಿ ತೆಂಗಿನಮರಗಳನ್ನು ಬೆಳೆಸಿ, ಅವುಗಳ ಅಗಲವಾದ ಹಾಗೂ ಮೇಣದ ಲೇಪವಿರುವ ಎಲೆಗಳ ಮೇಲೆ ಮಳೆಹನಿಗಳು ಬಿದ್ದು ಉಂಟುಮಾಡುವ ಶಬ್ದವನ್ನು ಕೇಳಿ ಆನಂದಿಸಬಹುದು. ಚಳಿಗಾಲದಲ್ಲಿ ತೆಂಗಿನ ಜಾತಿಯ ಗಿಡಗಳಮೇಲೆ ದಟ್ಟವಾಗಿ ಬತ್ತದ ಹುಲ್ಲಿನ ಹೊದಿಕೆ ಹಾಕಿ ರಕ್ಷಿಸುವುದುಂಟು. ಫಲಗಳು ಸೇವನೆಗೆ ಯೋಗ್ಯವಲ್ಲದಿದ್ದರೆ, ಅವುಗಳನ್ನು ಮೊದಲೇ ಕಿತ್ತುಬಿಡುವುದುಂಟು. ಇದರಿಂದ ಮರದ ಸತ್ತ್ವ ಶಕ್ತಿ ಹಾಗೇ ಉಳಿಯುತ್ತದೆ.

ಜಪಾನೀ ತೋಟಗಳಲ್ಲಿ ತ್ಸುಕಿ-ಯಾಮ ಮತ್ತು ಹೀರ-ನೀವ ಎಂಬ ಮುಖ್ಯ ಬಗೆಗಳನ್ನು ಗುರುತಿಸಬಹುದು. ಮೊದಲನೆಯ ಬಗೆಯಲ್ಲಿ ಕೃತಕ ಕಲ್ಲುಗುಡ್ಡಗಳೂ ಕೊಳಗಳೂ ಪ್ರಧಾನವಾಗಿದ್ದರೆ ಎರಡನೆಯದರಲ್ಲಿ ಕಣಿವೆಯನ್ನು ಸೂಚಿಸುವ ಬಯಲುಪ್ರದೇಶ ಮುಖ್ಯವಾಗಿರುತ್ತದೆ. ತ್ಸುಕಿ-ಯಾಮದಲ್ಲಿ ಸೆನ್-ಟೈ ಮತ್ತು ರಿನ್-ಸೆನ್ ಎಂಬ ಉಪಬಗೆಗಳೂ ಹೀರ-ನೀವದಲ್ಲಿ ಬುಂಜಿನ್-ಸುಕುರಿ ಎಂಬ ಉಪ ಬಗೆಯೂ ಇವೆ. ಇವು ಒಂದೊಂದಕ್ಕೂ ವಿಶಿಷ್ಟವಾದ ಲಕ್ಷಣಗಳಿವೆ. ಚಹಾಪಾನದ ಸಮಾರಂಭಕ್ಕೆಂದೇ ಮೀಸಲಾದ ರೋಜಿ ಎಂಬ ತೋಟವೂ ಉಂಟು.
(ಎಂ.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ